ಆಡಮ್ ಸ್ಮಿತ್
(1723-90). ಅರ್ಥಶಾಸ್ತ್ರದ ತಾತನೆಂದೂ ಅರ್ಥಶಾಸ್ತ್ರವನ್ನು ಒಂದು ಪ್ರತ್ಯೇಕ ವಿಜ್ಞಾನಶಾಖೆಯಾಗಿ ರೂಪಿಸಿ, ಅರ್ಥಶಾಸ್ತ್ರದ ಸಂಸ್ಥಾಪಕನೆಂದೂ ಕೀರ್ತಿ ಗಳಿಸಿದ ಆಡಮ್ ಸ್ಮಿತ್ ಸ್ಕಾಟ್ಲೆಂಡಿನ ಕಿರ್ಕಾಲ್ಡಿ ಎಂಬಲ್ಲಿ ಒಬ್ಬ ಸುಂಕದ ಅಧಿಕಾರಿಯ ಮಗನಾಗಿ ಜನಿಸಿದ. ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ಗಣಿತ ಮತ್ತು ವಿಜ್ಞಾನಗಳನ್ನೋದಿ ತದನಂತರ ಏಳು ವರ್ಷಗಳ ಕಾಲ ಆಕ್ಸ್‍ಫರ್ಡಿನ ಪ್ರಖ್ಯಾತ ಬ್ಯಾಲಿಯಲ್ ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದ. 1748ರಲ್ಲಿ ಎಡಿನ್‍ಬರೋಗೆ ತೆರಳಿ ಅಲ್ಲಿ ಡೇವಿಡ್ ಹ್ಯೂಮ್, ಜಾನ್ ಹ್ಯೂಮ್ ಅವರು ಸದಸ್ಯರಾಗಿದ್ದ ವಿದ್ವನ್ಮಂಡಲಿಯ ಸದಸ್ಯನಾದ. ಈತನ ಕಾರ್ಯಕ್ಷೇತ್ರ ಬಹು ವಿಸ್ತಾರವಾದದ್ದು. 1751ರಲ್ಲಿ ತಾನು ಕಲಿತ ಗ್ಲಾಸ್ಗೊ ವಿಶ್ವವಿದ್ಯಾನಿಲಯದಲ್ಲಿ ಮೊದಲು ತರ್ಕಶಾಸ್ತ್ರದ ಅಧ್ಯಾಪಕನಾಗಿಯೂ ಆಮೇಲೆ ನೀತಿಶಾಸ್ತ್ರದ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡಿದ. 1759ರಲ್ಲಿ ಪ್ರಥಮ ಗ್ರಂಥ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್ (ನೈತಿಕ ಭಾವನೆಗಳ ಸಿದ್ಧಾಂತ) ಪ್ರಕಟವಾಯಿತು. 1763-1766 ಅವಧಿಯಲ್ಲಿ ಡ್ಯೂಕನೊಬ್ಬನಿಗೆ ಸಂಚಾರೀ ಉಪಾಧ್ಯಾಯನೆಂಬ ನೆಪದಲ್ಲಿ ಯೂರೋಪನ್ನೆಲ್ಲ ಸುತ್ತಾಡಿ ಈ ಪ್ರವಾಸದಲ್ಲಿ ಮುಂದಿನ ಉದ್ಗ್ರಂಥಕ್ಕೆ ಬೇಕಾದ ಸಾಮಗ್ರಿಯನ್ನು ಸಂಗ್ರಹಿಸುವುದರಲ್ಲಿ ಮಗ್ನನಾಗಿದ್ದುದು ಮಾತ್ರವಲ್ಲದೆ, ಪ್ಯಾರಿಸ್‍ನಲ್ಲಿ ಕ್ವೆಸ್ನೇ, ಟರ್ಗಾಟ್ ಮತ್ತು ನೆಕ್ಕರ್ ಮುಂತಾದ ಸಮಕಾಲೀನ ಅರ್ಥಶಾಸ್ತ್ರಜ್ಞರನ್ನು ಭೇಟಿಯಾದ. 1778ರಲ್ಲಿ ಎಡಿನ್‍ಬರೋದಲ್ಲಿ ಸುಂಕದ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ. 1787ರಲ್ಲಿ ಗ್ಲಾಸ್ಗೊ ವಿಶ್ವವಿದ್ಯಾನಿಲಯ ಸ್ಮಿತ್‍ಗೆ ರೆಕ್ಟರ್ ಸ್ಥಾನವಿತ್ತು ಗೌರವಿಸಿತು.

ಸ್ಮಿತ್ ತನ್ನ ಗ್ರಂಥಗಳಲ್ಲಿ ಮೂಲಭೂತವಾದ ಅನೇಕ ಸಮಸ್ಯೆಗಳನ್ನು ಎತ್ತಿದ್ದಾನೆ, ಅನೇಕವನ್ನು ಬಿಡಿಸಿದ್ದಾನೆ. ನೈತಿಕ ಭಾವನೆಗಳ ಸಿದ್ಧಾಂತವನ್ನು ಕುರಿತು ಅವನ ಗ್ರಂಥದಲ್ಲಿ ಮಾನವ ವರ್ತನೆಯ ಸ್ವರೂಪದ ಉಲ್ಲೇಖವಿದೆ. ನೈತಿಕ ಹೊಣೆಗಾರಿಕೆಯ ಸ್ಪಷ್ಟಕಲ್ಪನೆ ಕಂಡು ಬರದೆ ಹೋದರೂ ಸ್ಮಿತ್ ಪ್ರಸ್ತಾಪಿಸಿದ ಅನುತಾಪ ಮತ್ತು ಅಪಾಕ್ಷಿಕ ಪ್ರೇಕ್ಷಕ ಎಂಬ ಎರಡು ತತ್ವಗಳು ಸಮಕಾಲೀನ ತತ್ವಾನ್ವೇಷಣೆಯಲ್ಲಿ ಮನ್ನಣೆ ಪಡೆದಿವೆ.

ನ್ಯಾಯಶಾಸ್ತ್ರ ಅಥವಾ ನ್ಯಾಯ, ಪೊಲೀಸ್, ಕಂದಾಯ ಮತ್ತು ಸೈನ್ಯ ಸಜ್ಜಿಕೆಯ ಮೇಲಿನ ಟಿಪ್ಪಣಿಗಳನ್ನೊಳಗೊಂಡ ಗ್ರಂಥದಲ್ಲಿ (ಜೂರಿಸ್‍ಪ್ರೂಡೆನ್ಸ್ ಆರ್ ನೋಟ್ಸ್ ಆನ್ ಜಸ್ಟಿಸ್, ಪೊಲೀಸ್, ರೆವೆನ್ಯು ಅಂಡ್ ಆರಮ್ಸ್) ಬ್ರಿಟನ್ನಿನಲ್ಲಿ ಪ್ರಾಚೀನ ಪಾಳೆಗಾರಿಕೆ ಮತ್ತು ರೋಮನ್ ನ್ಯಾಯ ಪದ್ಧತಿ ಹೇಗೆ ಪ್ರವರ್ತಿಸುತ್ತಿದೆ ಎಂಬ ಬಗ್ಗೆ ಸವಿಸ್ತಾರ ವರ್ಣನೆಯಿದೆ.

ರಾಷ್ಟ್ರಗಳ ಸಂಪತ್ತು ಅಥವಾ ರಾಷ್ಟ್ರಗಳ ಸಂಪತ್ತಿನ ಸ್ವರೂಪ ಮತ್ತು ಕಾರಣಗಳನ್ನು ಕುರಿತು ಅಧ್ಯಯನವನ್ನೊಳಗೊಂಡ ಗ್ರಂಥದಲ್ಲಿ (ಇನ್‍ಕ್ವೈರಿ ಇನ್‍ಟುದಿ ನೇಚರ್ ಅಂಡ್ ಕಾಸಸ್ ಆಫ್ ವೆಲ್ತ್ ಆಫ್ ನೇಷನ್ಸ್) ರಾಜಕೀಯ ಅರ್ಥಶಾಸ್ತ್ರವನ್ನು ಒಂದು ಸುಸಂಬದ್ಧವೂ ಸ್ವತಂತ್ರವೂ ಆದ ವಿಜ್ಞಾನ ಭಾಗವೆಂಬುದಾಗಿ ಸಿದ್ಧಪಡಿಸಲಾಗಿದೆ. ಇದು ಇಂಗ್ಲೆಂಡಿನ ಪಿಟ್, ಫ್ರಾನ್ಸಿನ ನೆಪೋಲಿಯನ್ ದೊರೆ, ಪ್ರಷ್ಯದ ಸ್ಟೀನ್ ಮತ್ತು ಆಸ್ಟ್ರಿಯದ ಗೆಂಟ್ಸ್ ಮುಂತಾದ ಧುರೀಣರ ಮೇಲೆ ಪ್ರಭಾವ ಬೀರಿತು. ಸ್ವಲ್ಪಕಾಲದಲ್ಲಿಯೇ ಇದು ಆರ್ಥಿಕ ಉದಾರವಾದಿಗಳ ಪ್ರಮಾಣಗ್ರಂಥವಾಯಿತು. ಇಂಥ ಪ್ರಚಂಡ ವಿಜಯಕ್ಕೆ (ಅ) ರಾಷ್ಟ್ರಗಳ ಸಂಪತ್ತಿನ ವಾದದಲ್ಲಿ ಅಡಗಿರುವ ಸಾರ್ವತ್ರಿಕ ಸತ್ಯ, (ಆ) ನೈಸರ್ಗಿಕ ಸ್ವಾತಂತ್ರ್ಯದ ಕೈವಾರಿತನ, (ಇ) ವಾದದ ತಳಹದಿಯಲ್ಲಿರುವ ಸರಳ ಮನೋವೈಜ್ಞಾನಿಕತಥ್ಯ-ಇವು ಕಾರಣಗಳು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಾರ್ಥಶೋಧನೆ ಮಾಡುತ್ತಿರುವಾಗಲೇ ದೈವದ ಅದೃಷ್ಟಹಸ್ತದ ಬೆಂಬಲದಿಂದಲೋ ಎಂಬಂತೆ ಸಾರ್ವಜನಿಕ ಮತ್ತು ಸಾಮೂಹಿಕ ಹಿತಸಾಧನೆಯಾಗುವ, ಸ್ವಾರ್ಥದಿಂದಲೇ ಪರಾರ್ಥ ಕೈಗೂಡುವಂಥ ಸಮನ್ವಯ ತತ್ವಗಳನ್ನೊಳಗೊಂಡ ಬಂಡವಾಳಶಾಹಿ ಅರ್ಥ ಸಂಘಟನೆಯ ದೃಶ್ಯವನ್ನು ಸ್ಮಿತ್ ತೋರಿಸಿಕೊಟ್ಟ. ಒಂದು ದೃಷ್ಟಿಯಿಂದ ಔದ್ಯಮಿಕ ಮೂಲಪುರುಷರಿಗೆ ಸ್ಮಿತ್ ಕೃತಜ್ಞತೆಯನ್ನು ಸೂಚಿಸಿದಂತೆ ತೋರಿದರೆ ಇನ್ನೊಂದು ದೃಷ್ಟಿಯಿಂದ ಬರಲಿರುವ ಅರ್ಥಮಂಡಲದ ಭವಿಷ್ಯರೂಪವನ್ನು ಇಲ್ಲಿ ಬಿತ್ತರಿಸಿದಂತೆಯೂ ಭಾಸವಾಗುವುದು. ಆಧುನಿಕ ಅರ್ಥಶಾಸ್ತ್ರ ನಿರಂತರ ಚರ್ಚಿಸುತ್ತಿರುವ ಔದ್ಯಮಿಕ ಉತ್ಪಾದನೆ, ಸಾಪೇಕ್ಷಮೌಲ್ಯ, ವರಮಾನ ವಿತರಣೆ, ಉದ್ಯೋಗ ಉಳಿತಾಯ, ಆರ್ಥಿಕಾಭಿವೃದ್ಧಿ-ಮುಂತಾದ ಪ್ರಮುಖ ತತ್ತ್ವಗಳ ಪ್ರತಿಭಾಪೂರ್ಣ ಮೂಲ ವಿವೇಚನೆ ಈ ಗ್ರಂಥದಲ್ಲಿ ದೊರೆಯುತ್ತದೆ.

ರಾಜಕೀಯ ಪ್ರಸಂಗಗಳ ಮೇಲಿನ ನಿಬಂಧನೆಗಳನ್ನು ಕುರಿತ ಎಸ್ಸೇಸ್ ಆನ್ ಪೊಲಿಟಿಕಲ್ ಸಬ್ಜೆಕ್ಟ್ಸ್ ಅಪರ ವಯಸ್ಸಿನಲ್ಲಿ ಸ್ಮಿತ್ ಪೂರ್ತಿಗೊಳಿಸಬೇಕೆಂದಿದ್ದ ಉದ್ಗ್ರಂಥದ ಒಂದು ಭಾಗ ಮಾತ್ರ ಈ ಹೆಸರಿನಲ್ಲಿ 1795ರಲ್ಲಿ ಅವನ ಮರಣಾನಂತರ ಪ್ರಕಟವಾಯಿತು.

 	ರಾಷ್ಟ್ರಗಳ ಸಂಪತ್ತನ್ನು ಕುರಿತ ವೆಲ್ತ್ ಆಫ್ ನೇಷನ್ಸ್ ಎಂಬ ಮಹಾಗ್ರಂಥದಲ್ಲಿ ಐದು ಭಾಗಗಳಿವೆ. ಒಂದನೆಯ ಭಾಗದಲ್ಲಿ ಸ್ಮಿತ್ತನ ಪ್ರಖ್ಯಾತ ಶ್ರಮವಿಭಜನೆಯ ತತ್ತ್ವವೂ, ಮೌಲ್ಯ ಮತ್ತು ವಿತರಣೆಯ ಸಿದ್ಧಾಂತಗಳೂ ಅಡಕವಾಗಿವೆ. `ಜೀವನದ ಸಕಲ ಅವಶ್ಯಕತೆ ಮತ್ತು ಸೌಕರ್ಯಗಳನ್ನು ರಾಷ್ಟ್ರದ ವಾರ್ಷಿಕ ಶ್ರಮದ ಮೊತ್ತವೇ ಮೂಲತಃ ಒದಗಿಸುವುದು. ಶ್ರಮವೇ ಸಂಪತ್ತಿನ ನಿಜವಾದ ಮೂಲ. ಪ್ರತಿಯೊಬ್ಬನೂ ನೀಡುವ ವೈವಿಧ್ಯಪೂರ್ಣವಾದ ಶ್ರಮ, ಸಹಕಾರಗಳಿಂದ ರಾಷ್ಟ್ರದ ಸಂಪತ್ತು ವರ್ಧಿಸುವುದು. ರಾಷ್ಟ್ರೀಯ ವರಮಾನದ ಉತ್ಪಾದನೆಯನ್ನು ಸುಲಭವೂ ಸಹಜವೂ ಆದ ಆರ್ಥಿಕ ಯತ್ನದಿಂದ ಸಾಧಿಸಬೇಕಾದರೆ ಶ್ರಮ ವಿಭಜನೆಗೆ ಶರಣು ಹೋಗಬೇಕು. ಏಕೆಂದರೆ (ಅ) ಒಬ್ಬ ಒಂದೇ ಕೆಲಸದಲ್ಲಿ ಮಗ್ನನಾದರೆ ಅವನ ಕೈ ಕುಶಲತೆ ಹೆಚ್ಚುವುದು. (ಆ) ಸಮಯದ ಮಿತವ್ಯಯ ಸಾಧನೆಯಾಗುವುದು. (ಇ) ತಾನು ಮಾಡುತ್ತಿರುವ ವಿಶಿಷ್ಟಕಾರ್ಯಭಾಗದಲ್ಲಿ ಶ್ರಮಿಕ ನೂತನ ಆವಿಷ್ಕಾರಗಳನ್ನೂ ಸುಧಾರಣೆಗಳನ್ನೂ ಯೋಚಿಸಿ ರೂಢಿಸಲು ಶಕ್ತನಾಗುತ್ತಾನೆ. ಆದರೆ ಒಂದು ಉದ್ಯೋಗದಲ್ಲಿ ಎಷ್ಟರಮಟ್ಟಿಗೆ ಶ್ರಮವಿಭಜನೆಯನ್ನು ಅಳವಡಿಸಬಹುದೆನ್ನುವುದು ತಯಾರಿಸಿದ ಸರಕಿಗೆ ಒದಗುವ ಮಾರುಕಟ್ಟೆಯ ವ್ಯಾಪ್ತಿಯನ್ನೂ ಬಂಡವಾಳದ ಒದಗುವಿಕೆಯ ಗಾತ್ರವನ್ನೂ ಅವಲಂಬಿಸಿದೆ. ಮಾರುಕಟ್ಟೆ ವಿಶಾಲವಾದಷ್ಟೂ ಶ್ರಮವಿಭಜನೆಗೆ ಆಸ್ಪದ ಅಧಿಕವಾಗುವುದು. ಎರಡನೆಯ ಭಾಗದಲ್ಲಿ ಬಂಡವಾಳ, ಉಳಿತಾಯ ಮತ್ತು ಹೂಟೆಗಳ (ಇನ್‍ವೆಸ್ಟ್‍ಮೆಂಟ್) ಪ್ರಸ್ತಾಪವಿದೆ. ಖಾಸಗಿ ಜೀವನದಲ್ಲಿ ಮಿತವ್ಯಯವನ್ನು ಸಾಧಿಸಿದ ವ್ಯಕ್ತಿ ಸ್ಮಿತ್‍ನ ಅಭಿಪ್ರಾಯದಲ್ಲಿ ಒಬ್ಬ ರಾಷ್ಟ್ರಹಿತ ಸಾಧಕನೇ. ಉಳಿತಾಯವೂ ಹೂಟೆಯೂ ಭಿನ್ನ ಕಾರ್ಯಗಳಲ್ಲ. ಉಳಿತಾಯವೇ ಹೂಟೆ. ಸುಮಾರು ಒಂದೂವರೆ ಶತಮಾನಗಳ ಕಾಲ ಸ್ಮಿತ್‍ನ ಈ ತತ್ತ್ವ ಪ್ರಭಾವವನ್ನು ಬೀರಲು ಶಕ್ತವಾಯಿತು. ಅರ್ಥಶಾಸ್ತ್ರದ ವಿಚಾರಗಳಲ್ಲಿ ಕ್ಲಾಸಿಕಲ್ ಪದ್ಧತಿಯ ಆರಂಭ ಸ್ಮಿತ್‍ನಿಂದಲೇ ಆಯಿತು. ಮೂರನೆಯ ಭಾಗ ವಿಭಿನ್ನ ರಾಷ್ಟ್ರಗಳಲ್ಲಿ ಸಂಪತ್ತಿನ ಗಾತ್ರ ಹೆಚ್ಚು ಕಡಿಮೆಯಾಗಲು ಕಾರಣಗಳನ್ನು ಸೂಚಿಸುತ್ತದೆ. ಐರೋಪ್ಯ ಆರ್ಥಿಕ ಚರಿತ್ರೆಯಿಂದ ಅನೇಕ ನಿದರ್ಶನಗಳನ್ನು ಎತ್ತಿಕೊಂಡು ಜಮೀನು ಹಿಡುವಳಿ, ವಾರಸಹಕ್ಕು ಮೊದಲಾದ ವಿಷಯಗಳಲ್ಲಿ ಕಾನೂನಿನ ಹಸ್ತಕ್ಷೇಪದ ದುಷ್ಪರಿಣಾಮಗಳನ್ನು ಸ್ಮಿತ್ ವಿವರಿಸಿದ್ದಾನೆ. ನಾಲ್ಕನೆಯ ಭಾಗದಲ್ಲಿ ಬ್ರಿಟನ್ನಿನ ಪ್ರಚಲಿತ ವಾಣಿಜ್ಯ ಧೋರಣೆಗಳ ಚೌಕಟ್ಟಿನಲ್ಲಿ ಮರ್ಕೆಂಟಲಿಸ್ಟ್ ನೀತಿಯನ್ನು ಪುರಸ್ಕರಿಸುವುದರಿಂದ ಒದಗುವ ಹಾನಿಯನ್ನು ಬಿಚ್ಚಿ ತೋರಿಸಿ ಒಳನಾಡಿನ ಸ್ವತಂತ್ರವ್ಯಾಪಾರದ ಮೇಲೆ ಹೇರುವ ನಿರ್ಬಂಧಗಳನ್ನೂ ಗುತ್ತಿಗೇದಾರಿಯನ್ನೂ ಸ್ಮಿತ್ ಖಂಡಿಸಿದ್ದಾನೆ. ಐದನೆಯ ಭಾಗದಲ್ಲಿ ರಾಜನ ಅಥವಾ ರಾಷ್ಟ್ರದ ಆದಾಯದ ಉಲ್ಲೇಖವಿದೆ.

 	ಆರ್ಥಿಕ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಿರುವುದು ಸಮಾಜದ ಹಿತಸಂವರ್ಧನೆಗೆ ಸಾಧಕವೆಂದು ಸ್ಮಿತ್ ವಾದಿಸುತ್ತಾನೆ. ಯಾವ ಕಾಲದ ಯಾವ ಸರಕಾರವನ್ನೇ ನೋಡಿದರೂ ದುಂದು ವೆಚ್ಚವೆಂಬುದು ಸರ್ಕಾರಿ ವ್ಯಯನೀತಿಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅಲ್ಲದೆ ಒಂದು ಉದ್ಯಮದ ಸೂಕ್ಷ್ಮಪರಿಶೀಲನೆ ಸರ್ಕಾರದ ಸ್ಥೂಲದೃಷ್ಟಿಗೆ ಸಾಧ್ಯವಿಲ್ಲ. ವ್ಯಾಪಾರೋದ್ದಿಮೆಗಳ ಮೇಲಿನ ಹತೋಟಿಯ ಆಡಳಿತವನ್ನು ಸರ್ಕಾರ ಮಾಡಿದರೆ ತನ್ನ ಅಸಮರ್ಥತೆಯನ್ನು ಪ್ರಕಟಿಸಿದಂತಾಗುವುದಷ್ಟೆ. ಆದ್ದರಿಂದ ರಾಷ್ಟ್ರರಕ್ಷಣೆ, ನ್ಯಾಯಪರಿಪಾಲನೆ, ಸಾರ್ವಜನಿಕ ಕಾಮಗಾರಿ ಈ ಮೂರನ್ನೇ ಹೊರತು ಇತರ ಯಾವ ಆರ್ಥಿಕ ವಿಷಯದಲ್ಲಿಯೂ ಸರ್ಕಾರ ಕೈ ಹಾಕಕೂಡದು. 

 	ಆರ್ಥಿಕ ಪ್ರಪಂಚದ ವ್ಯವಹಾರಗಳಲ್ಲಿ ಸ್ಮಿತ್ ನಿಸರ್ಗವಾದವನ್ನು (ನ್ಯಾಚುರಲಿಸಮ್) ನಂಬಿದವ. ವ್ಯಕ್ತಿ ತನ್ನ ಸ್ವಾರ್ಥಸಾಧನೆಯಲ್ಲಿ ಪ್ರವರ್ತಿಸುತ್ತಿರುವ ವೇಳೆಯಲ್ಲಿಯೇ ಅವನಿಗರಿವಿಲ್ಲದಂತೆ ಸಮಾಜದ ಒಳಿತು ಕೈಗೂಡುವಂತೆ ಅದೃಶ್ಯ ಹಸ್ತವೊಂದು ಸದಾ ಕಾರ್ಯತತ್ಪರವಾಗಿರುವಂತೆ ಆತನಿಗೆ ಕಂಡಿತು. ತನಗೆ ಹೆಚ್ಚಾದ್ದನ್ನು ಇನ್ನೊಬ್ಬರಿಗೆ ಕೊಡುವ, ಅವರಿಂದ ಪಡೆವ, ಕೊಡುಕೊಳೆಯ ಸಹಜಪ್ರವೃತ್ತಿಯೇ ವ್ಯಾಪಾರವಾಯಿತು. ಸರ್ಕಾರ ಮುದ್ರೆ ಒತ್ತುವುದಕ್ಕೆ ಮುನ್ನವೇ ಯಾವುದಾದರೂ ಒಂದು ಪದಾರ್ಥವನ್ನು ವಿನಿಮಯದ ಮಾಧ್ಯಮವನ್ನಾಗಿ ಬಳಸಿ ಮನುಷ್ಯರು ಹಣವನ್ನು ಸೃಷ್ಟಿಸಿಕೊಂಡರು. ವೈಯಕ್ತಿಕ ಹಿತಾನ್ವೇಷಣೆಗಾಗಿ ಮಾಡಿದ ವ್ಯಕ್ತಿಗತ ಉಳಿತಾಯ ಸಾಮಾಜಿಕ ಬಂಡವಾಳದ ರೂಪತಾಳಿತು. ಸರಕುಗಳ ಬೇಡಿಕೆ ಅತಿ ಸಹಜವಾಗಿ ಅವುಗಳ ಪೂರೈಕೆಯೊಡನೆ ಹೊಂದಿಕೆಯಾಗಿ ಸಮತೋಲ ಸ್ಥಿತಿಯನ್ನು ಮುಟ್ಟುವುದು. ಉಳಿತಾಯ ತನ್ನಂತೆ ಫಲಪ್ರದವಾದ ಹೂಟೆಯ ಕ್ಷೇತ್ರಗಳನ್ನು ಆರಿಸಿಕೊಳ್ಳುವುದು. ಇವು ಸ್ಮಿತ್‍ನನ್ನು ಆರ್ಥಿಕ ಸ್ವಾತಂತ್ರ್ಯದ ಆಚಾರ್ಯ ಪದವಿಗೆ ಏರಿಸಿದ ಸೂತ್ರಗಳು. ತನ್ನ ಕಾಲದಲ್ಲಿ ಬಹು ಪ್ರಚಲಿತವಾಗಿದ್ದು, ದೇಶದ ಆರ್ಥಿಕ ಪದ್ಧತಿಗೆ ಕಾಲ್ತೊಡಕಾಗಿದ್ದ ಮರ್ಕೆಂಟಲಿಸ್ಟ್ ನೀತಿಯನ್ನೂ, ಜಮೀನೊಂದೇ ಸಂಪತ್ತಿನ ಮೂಲವೆಂಬ ಫಿಸಿಯೊ ಕ್ರೆಟಿಕ್ ಪಂಥದವರ ಏಕಪಕ್ಷೀಯ ವಾದವನ್ನೂ ಸ್ಮಿತ್ ತನ್ನ ಸರಣಿಯಿಂದ ಪ್ರತಿಭಟಿಸಿದ.

ಹೊರತೋರಿಕೆಗೆ ಗೊಂದಲಮಯವೆಂದು ತೋರುವ ವ್ಯಾಪಾರವಹಿವಾಟಿನ ಪೈಪೋಟಿ ಯಾವ ಕೇಂದ್ರೀಯ ನಿರ್ದೇಶನವೂ ಇಲ್ಲದೇ ವ್ಯಕ್ತಿಗಳ ಸ್ವತಂತ್ರ ನಿರ್ಣಯಗಳ ಬಲದಿಂದಲೇ ಪ್ರಜೆಯ ಬೇಡಿಕೆಗಳನ್ನು ಪೂರೈಸುತ್ತ ರಾಷ್ಟ್ರದ ಸಂಪತ್ತಿನ ಸಂವರ್ಧನೆಗೆ ನೆರವಾಗುವ ಸುಂದರಚಿತ್ರವನ್ನು ಸ್ಮಿತ್ ತನ್ನ ಗ್ರಂಥದಲ್ಲಿ ಎಲ್ಲರೂ ಅಂದರೆ ಸ್ಥೂಲವಾಗಿ ಸಮಷ್ಟಿವಾದಿಗಳೂ ಕೂಡ ಒಪ್ಪುವಂತೆ ಮೂಡಿಸಿದ್ದಾನೆ. 										      
  (ಕೆ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ